ಬಾಲಸುಬ್ರಹ್ಮಣಮ್, ಜಿ ಎನ್ 
1910-65. ಕರ್ನಾಟಕ ಸಂಗೀತ ವಿದ್ವಾಂಸರು, ವಾಗ್ಗೇಯಕಾರರು, ನವಶೈಲಿಯ ಪ್ರವರ್ತಕರು. ಜಿಎನ್‍ಬಿ ಎಂಬುದಾಗಿ ಪ್ರಸಿದ್ಧರು. ಇವರ ತಂದೆ ಜಿ. ವಿ. ನಾರಾಯಣಸ್ವಾಮಿ ಮದ್ರಾಸಿನ ತಿರುವಲ್ಲಿಕ್ಕೇಣಿಯಲ್ಲಿರುವ ಹಿಂದೂ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರು. ಇವರು ಸ್ವತಃ ಸಂಗೀತ ರಸಿಕರು, ಪಿಟೀಲುವಾದಕರು ಮತ್ತು ಪಾರ್ಥಸಾರಥಿಸ್ವಾಮಿ ಸಂಗೀತ ಸಭೆಯ ಕಾರ್ಯದರ್ಶಿಗಳು. ತಾಯಿಗೆ ಸಂಗೀತ ಚೆನ್ನಾಗಿ ತಿಳಿದಿತ್ತು. ಇವರ ಪುತ್ರರಾಗಿ ಜಿಎನ್‍ಬಿ 1910 ಜೂನ್ 6 ರಂದು ಜನಿಸಿದರು. ಸಂಗೀತ ಪರಿಸರದಲ್ಲಿ ಬೆಳೆದ ಈ ಅಣುಗನಿಗೆ ಮನೆಯ ಪಕ್ಕದಲ್ಲಿ ವಾಸನಾಗಿದ್ದ ಪಿಟೀಲು ವಿದ್ವಾಂಸ ಕರೂರು ಚಿನ್ನಸ್ವಾಮಿ ಅಯ್ಯರರ ಮನೆಯಲ್ಲಿ ನಡೆಯುತ್ತಿದ್ದ ತಿರುವೈಯ್ಯಾರ್ ಸಭೇಶ ಅಯ್ಯರ್, ಬೂದಲೂರು ಕೃಷ್ಣಮೂರ್ತಿಶಾಸ್ತ್ರಿ, ಪಲ್ಲಡಮ್ ಸಂಜೀವರಾವ್ ಮುಂತಾದವರ ಕಛೇರಿಗಳನ್ನು ಕೇಳುವ ಸದವಕಾಶ ದೊರಕಿತು ತಮ್ಮ ಮಗನಲ್ಲಿದ್ದ ಸಂಗೀತದ ಒಲವನ್ನು ಗಮನಿಸಿದ ತಂದೆ ಈತನನ್ನು ಶಾಲೆಗೆ ಸೇರಿಸಿದ್ದಲ್ಲದೆ ಮನೆಯಲ್ಲಿ ಸಂಗೀತವನ್ನೂ ಸಂಗೀತ ಶಾಸ್ತ್ರವನ್ನೂ ಹೇಳಿ ಕೊಟ್ಟರು. ಮುಂದೆ ಇವರಿಗೆ ಪಟ್ನಮ್ ಸುಬ್ರಹ್ಮಣ್ಯ ಅಯ್ಯರರ ಶಿಷ್ಯ ಗುರುಸ್ವಾಮಿ ಭಾಗವತರಲ್ಲೂ ತ್ಯಾಗರಾಜರ ವಂಶಕ್ಕೆ ಸೇರಿದ್ದ ಹಾಗೂ ಕರೂರು ಚಿನ್ನ ಸ್ವಾಮಿಯವರ ಶಿಷ್ಯರಾಗಿದ್ದ ಪಿಟೀಲು ವಿದ್ವಾಂಸ ಮಧುರೈ ಸುಬ್ರಹ್ಮಣ್ಯ ಅಯ್ಯರರಲ್ಲೂ ಸಂಗೀತ ಶಿಕ್ಷಣ ನೀಡಲಾಯಿತು.

ಕಾಲೇಜು ಶಿಕ್ಷಣದಲ್ಲಿ ಇವರು ಆಂಗ್ಲ ಸಾಹಿತ್ಯ ಆಯ್ದು ಪ್ರೆಡೆನ್ಸಿ ಕಾಲೇಜಿನಲ್ಲಿ ಆನರ್ಸ್ ಪದವಿ ತರಗತಿಗೆ ಸೇರಿದರು (1928). ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಸಂಗೀತದ ಕಾಲೇಜು ಪ್ರಾರಂಭವಾದಾಗ ಅಲ್ಲಿಯ ಪ್ರಾಂಶುಪಾಲರಾದ ಸಭೇಶ ಅಯ್ಯರರ ಸಲಹಯಂತೆ ಆ ವಿಶ್ವವಿದ್ಯಾಲಯ ಸೇರಿ ಆನರ್ಸ್ ಅಧ್ಯಯನದ ಜೊತೆಗೆ ಸಂಗೀತ ತರಗತಿಗೆ ಸೇರಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದರು. ಆದರೆ ಅನಾರೋಗ್ಯದ ನಿಮಿತ್ತ ಅಣ್ಣಾಮಲೈಯನ್ನು ಬಿಟ್ಟು ಪುನಃ ಪ್ರೆಸಿಡೆನ್ಸಿ ಕಾಲೇಜಿಗೆ ಮರಳಿ ಆನರ್ಸ್ ಆಧ್ಯಯನ ಮುಂದುವರಿಸಿ ಪದವಿ ಪಡೆದರು. ತಂದೆಯವರಿಗೆ ತಮ್ಮ ಮಗ ವಕೀಲನಾಗಬೇಕೆಂಬ ಆಸೆಯಿತ್ತು. ಆದರೆ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ಯರ ಸಲಹೆ ಮೇರೆಗೆ ಮಗ ಸಂಗೀತದಲ್ಲೇ ಮುಂದುವರಿಯಲು ಸಮ್ಮತಿಸಿದರು. ಅಂತೆಯೇ ಜಿಎನ್‍ಬಿಯವರು ಟೈಗರ್ ವರದಾಚಾರ್ಯರ ನಿರ್ದೇಶನದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಆಗತಾನೇ ಪ್ರಾರಂಭವಾಗಿದ್ದ ಸಂಗೀತ ಡಿಪ್ಲೊಮಾ ತರಗತಿ ಸೇರಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು. 

1928ರಲ್ಲಿ ಜಿಎನ್‍ಬಿಯವರಿಗೆ ಅವರ 18ನೆಯ ವಯಸ್ಸಿನಲ್ಲಿ ಒಂದು ಸುದಿನ ಒದಗಿತು. ಮದ್ರಾಸಿನ ಕಪಾಲೀಶ್ವರ ದೇವಸ್ಥಾನದಲ್ಲಿ ಏರ್ಪಾಡಾಗಿದ್ದ ಮುಸಿರಿ ಸುಬ್ರಹ್ಮಣ್ಯ ಅಯ್ಯರರ ಕಛೇರಿ ಕೇಳಲು ಹೋಗಿದ್ದರು. ಬಹಳ ಹೊತ್ತಾದರೂ ಮುಸಿರಿಯವರು ಬರಲಿಲ್ಲ. ವ್ಯವಸ್ಥಾಪಕ ರಾಮಚಂದ್ರ ಅಯ್ಯರರ ಕೋರಿಕೆಯಂತೆ ತಂದೆ ಮತ್ತು ತಮ್ಮ ಗುರುವಿನ ಆಶೀರ್ವಾದ ಪಡೆದು ವೇದಿಕೆಯ ಹತ್ತಿರ ಬಂದು ಭಯಭಕ್ತಿಗಳಿಂದ ಕಛೇರಿ ಗಾಯನ ಮಾಡಿ ಒಮ್ಮಲೇ ಪ್ರಕಾಶಕ್ಕೆ ಬಂದರು. ಅಲ್ಲಿಂದ ಮುದೆ ಅವರ ಸಂಗೀತ ಜೀವನವಾಹಿನಿ ತಡೆಯಿಲ್ಲದೆ ಕೊನೆಯತನಕವೂ ಅವ್ಯಾಹತವಾಗಿ ಪ್ರವಹಿಸಿತು. ಇವರು ತಿರುವಾಂಕೂರು ಮತ್ತು ಎಟ್ಟಯಾಪುರ ಸಂಸ್ಥಾನಗಳ ಆಸ್ಥಾನವಿದ್ವಾಂಸರಾಗಿದ್ದರು (1939 ಮತ್ತು 1941). ಮದ್ರಾಸಿನ ಆಕಾಶವಾಣಿಯ ಸಂಗೀತವಿಭಾಗದ ಮುಖ್ಯಸ್ಥರೂ (1954-64) ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತಕಾಲೇಜಿನ ಪ್ರಧಾನಾಚಾರ್ಯರೂ (1964) ಆಗಿದ್ದರು. ಭಾರತ ಸರ್ಕಾರದ ರಾಷ್ಟ್ರಪ್ರಶಸ್ತಿ (1960), ಮದ್ರಾಸ್ ಮ್ಯೂಸಿಕ್ ಅಕಾಡಮಿಯ ಸಂಗೀತದ ಕಲಾನಿಧಿ ಪ್ರಶಸ್ತಿ (1958) ಕೂಡ ಪಡೆದರು. ಭಾಮಾವಿಜಯ, ಸತಿ ಅನಸೂಯ, ವಾಸವದತ್ತಾ, ರುಕ್ಮಾಂಗದ ಮತ್ತು ಶಕುಂತಲಾ ಎಂಬ ಚಲನಚಿತ್ರಗಳಲ್ಲಿ ಅಭಿನಯಿಸಿ ಖ್ಯಾತರಾದರು. ಹಿಂದೂಸ್ಥಾನಿ ಸಂಗೀತವೆಂದರೆ ಇವರಿಗೆ ಅಪಾರಮೋಹ. ಒಂದು ಸಲ ಬಡೇಗುಲಾಮ್ ಅಲಿಖಾನರ ಗಾಯನವನ್ನು ಕೇಳಿ ತಮಗಾದ ಆನಂದವನ್ನು ತಡೆಯಲಾರದೆ ಅವರಿಗೆ ಪೀತಾಂಬರ ಹೊದ್ದಿಸಿ ಸಾಷ್ಟಾಂಗ ಪ್ರಣಾಮಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಖಾನರು ತಂಗಿದ್ದ ಮನೆಗೆ ಹೋದಾಗ ಅವರ ಕೋರಿಕೆಯಂತೆ ಆಂದೋಳಿಕಾ ರಾಗವನ್ನು ಹಾಡಿದಾಗ ಖಾನರು ಜಿಎನ್‍ಬಿ ಯವರಿಗೆ ಪಾದಮುಟ್ಟಿ ನಮಸ್ಕರಿಸಿದರು.

ಜಿಎನ್‍ಬಿಯವರದು ಹಿತವಾಗಿಯೂ ವೇಗವಾಗಿಯೂ ಓಡುವ ಶಾರೀರ. ತಾರುಣ್ಯದಲ್ಲಿ ಆರೂವರೆ ಅಡಿ ಕಟ್ಟೆ ಶಾರೀರ ಇವರದು. ತ್ರಿಸ್ಥಾಯಿಗಳಲ್ಲೂ ತ್ರಿಕಾಲಗಳಲ್ಲೂ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು. ಶಕ್ತಿಯುತವಾದ, ಜೀವತುಂಬಿರುವ ಮತ್ತು ಮೈನವಿರೇಳಿಸುವ ಶೈಲಿ. ಬಿರ್ಕಾಗಳನ್ನು ಪ್ರಯೋಗಿಸಿ ಹಾಡುವುದರಲ್ಲಿ ಅಗ್ರಗಣ್ಯರು. ಹೀಗೆ ಇವರು ತಮ್ಮ ನೂತನ ಶೈಲಿಯಿಂದ ಒಂದು ಕ್ರಾಂತಿ ಉಂಟುಮಾಡಿದರು. ಪ್ರತಿಯೊಂದು ಸಂಗೀತ ಕಛೇರಿಯಲ್ಲೂ ಶೈಕ್ಷನಿಕಾಂಶವಿರಬೇಕೆಂಬ ನಿಲವನ್ನು ಲಕ್ಷ್ಯ ಮತ್ತು ಲಕ್ಷಣ ವಿದ್ವಾಂಸರಾಗಿದ್ದ ಜಿಎನ್‍ಬಿ ತಮ್ಮ ಗಾಯನದಲ್ಲಿ ಪ್ರತಿಪಾದಿಸುತ್ತಿದ್ದರು. ರಾಗಾಲಾಪನೆಯ ನಿರೂಪಣೆಯಲ್ಲಿ ಅವರ ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಬುದ್ಧಿ ಕಂಡುಬರುತ್ತಿದ್ದುವು. ರಾಗಗಳ ಜೀವಸ್ವರಗಳೇ ಅಲ್ಲದೆ ಇತರ ಸ್ವರಗಳನ್ನೂ ಚೆನ್ನಾಗಿ ಬಳಸಿ ಆಲಾಪಿಸುತ್ತಿದರು. ಟಿ.ವಿ. ಸುಬ್ಬರಾಯರು ಹೇಳಿರುವಂತೆ ಇವರದು ಸೋಪಾನಪದ್ಧತಿ. ಕೃತಿಗಳನ್ನು ಸುಂದರವಾಗಿ ಕಡೆದಿಟ್ಟ ವಿಗ್ರಹಗಳಂತೆ ನಿರೂಪಿಸುತ್ತಿದ್ದರು. ಹಂತಹಂತವಾಗಿ ಹೊಳೆಯುವ ಸಂಗತಿಗಳ ಪ್ರವಾಹ, ಸ್ವರಾಕ್ಷರಗಳ ಪ್ರಯೋಗದಲ್ಲಿ ಪ್ರಾಮುಖ್ಯ, ಜಾರು ಪ್ರಯೋಗ ಇವೇ ಮುಂತಾದವುಗಳಿಂದ ಅವರ ಗಾಯನದಲ್ಲಿ ಕೃತಿಗಳು ನವೀನತೆಯಿಂದ ಪ್ರಕಾಶಿಸುತ್ತಿದ್ದುವು. ಮರುಗೇಲರ, ಸರಸ, ಸಾಮದಾನ, ಚಲಮೀಲರ ಮುಂತಾದವುಗಳ ಹಾಡುಗಾರಿಕೆ ಇವರ ಶೈಲಿಗೆ ನಿದರ್ಶನ. ಚೆಂಚು ಕಾಂಬೋಜಿ, ಟಕ್ಕ, ನಾರಾಯಣಿ, ದೀಪಕ ಮುಂತಾದ ಅಪರೂಪ ರಾಗಗಳ ಕೃತಿಗಳನ್ನು ಬೆಳಕಿಗೆ ತಂದರು. ಜಿಎನ್‍ಬಿಯವರ ಸ್ವರಪ್ರಸ್ತಾರದಲ್ಲಿ ಒಂದು ವೈಶಿಷ್ಟ್ಯವಿತ್ತು. ಇವರು ಮಾಮೂಲಿನ ಎಡುಪುಗಳ ಬದಲಾಗಿ ಬೇರೆ ಎಡುಪುಗಳನ್ನು ತೆಗೆದುಕೊಳ್ಳುತ್ತಿದ್ದರಲ್ಲದೆ ವಿಶೇಷ ಮುಕ್ತಾಯ ಸ್ವರಗಳನ್ನು ಕೂಡ ಪೋಣಿಸುತ್ತಿದ್ದರು. ಸುಬ್ರಹ್ಮಣ್ಯಾಯ ನಮಸ್ತೆ ಎಂಬ ಕೃತಿಯಲ್ಲಿ ತಾಪತ್ರಯ ಎಂಬ ಭಾಗವನ್ನೂ ನಿಧಿಚಾಲಸುಖಮಾ ಎಂಬ ಕೃತಿಯಲ್ಲಿ ಸುಮತಿ ತ್ಯಾಗರಾಜ ಎಂಬ ಭಾಗವನ್ನೂ ತೆಗೆದುಕೊಳ್ಳುತ್ತಿದ್ದುದನ್ನು ಉದಾಹರಿಸಬಹುದು. ರಾಗ, ತಾನ, ಪಲ್ಲವಿ ಹಾಡುವಾಗ ರಾಗವನ್ನು 3-4 ಹಂತಗಳಲ್ಲಿ ಹಾಡಿ ಶ್ರುತಿಭೇದ ಮಾಡುತ್ತಿದ್ದದು ಇವರ ಶೈಲಿಯ ಒಂದು ವಿಶೇಷ ಸೊಬಗು, ಮಾಳವಿ, ಆಂದೋಳಿಕಾ ಮುಂತಾದ ಚಿಕ್ಕರಾಗಗಳನ್ನು ತೆಗೆದುಕೊಂಡು ವಿಸ್ತಾರವಾಗಿ ಹಾಡುತ್ತಿದ್ದುದು ಇನ್ನೊಂದು ವಿಶೇಷ.

ತಮಿಳು, ಸಂಸ್ಕøತ, ತೆಲುಗು, ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯವಿತ್ತು. ಸಂಶೋಧನಾ ಪ್ರವೃತ್ತಿ ಪ್ರಬಲವಾಗಿತ್ತು. ತತ್ಪರಿಣಾಮವಾಗಿ ಉತ್ತಮ ವಾಗ್ಗೇಯಕಾರರಾಗಿ ಈ ಮೂರೂ ಭಾಷೆಗಳಲ್ಲಿ ದೇವಿ, ಸುಬ್ರಹ್ಮಣ್ಯ, ಶ್ರೀರಾಮ, ಗಣಪತಿ ಇವರನ್ನು ಕುರಿತು ಹಲವಾರು ಕೃತಿಗಳನ್ನು ರಚಿಸಿದರು. ಗಾಲಭಾಸ್ಕರ ಮಣಿಮಾಲೈ ಎಂಬ ಹೆಸರಿನ ಗ್ರಂಥದಲ್ಲಿ ಇವು ಪ್ರಕಟವಾಗಿವೆ. ಸದಾಪಾಲಯ, ರಂಜನಿನಿರಂಜನಿ, ಮಮಕುಲೇಶ್ವರಂ, ಪರಮಕೃಪಾಸಾಗರೀ ಪರಾಙ್ಮಖಮೇಲ ಮುಂತಾದ ಜನಪ್ರಿಯ ಕೃತಿಗಳು ಇವರ ಶೈಲಿಯ ಪ್ರತೀಕವಾಗಿವೆ. ಜಿಎನ್‍ಬಿಯವರು ಸಂಗೀತ ವಿದ್ವಾಂಸನಲ್ಲಿರಬೇಕಾದ ಎಲ್ಲ ಶ್ರೇಷ್ಠಗುಣಗಳನ್ನೂ ಯೋಗ್ಯತೆಯನ್ನೂ ಹೊಂದಿದ್ದರು. ತರುಣಪೀಳಿಗೆಯ ಸಂಗೀತಗಾರರು ಇವರ ಶೈಲಿಯಿಂದ ಬಹುವಾಗಿ ಪ್ರಭಾವಿತರಾಗಿದ್ದಾರೆ. ಇವರ ಅಪಾರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಎಂ.ಎಲ್. ವಸಂತಕುಮಾರಿ, ಟಿ.ಆರ್. ಬಾಲಸುಬ್ರಹ್ಮಣ್ಯಮ್, ಸೋಮೇಶ್ವರಬಾಬು, ಎಸ್. ಬಾಲಸುಬ್ರಹ್ಮಣ್ಯಮ್, ಟಿ.ವಿ. ವಿಶ್ವನಾಥನ್, ಮಧುರೈ ಗಣೇಶನ್, ಎಸ್.ಕಲ್ಯಾಣರಾಮನ್, ತಿರುಚ್ಚೂರ್ ವಿ. ರಾಮಚಂದ್ರನ್, ಎಲ್. ಕೃಷ್ಣನ್ ಮುಂತಾದವರು ಪ್ರಸಿದ್ಧರು.		(ವಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ